ಭಾರತದಲ್ಲಿ ನೀರಾವರಿ

	ಭಾರತದಲ್ಲಿ ನೀರಾವರಿ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದೆ. ಅಂದಿನ ಕೆರೆ ಬಾವಿ, ಅಣೆಕಟ್ಟು ಇತ್ಯಾದಿಗಳ ಅವಶೇಷಗಳು ಭಾರತದ ನಾನಾ ಕಡೆಗಳಲ್ಲಿ ಕಾಣಬರುತ್ತವೆ. ಈ ದೇಶದಲ್ಲಿ ನೀರಾವರಿಗೆ ದೂರೆಯುವ ಒಟ್ಟು ವಿಸ್ತೀರ್ಣ ಬೇರೆ ದೇಶಗಳಿಗಿಂತಲೂ ಹೆಚ್ಚು. ನೀರಾವರಿ ವಿಧಾನಗಳನ್ನು ವೈಜ್ಞಾನಿಕವಾಗಿ ರೂಪಿಸಿಕೊಂಡು ತನ್ಮೂಲಕ ನಾಡಿನ ಕೃಷಿ ಆರ್ಥಿಕತೆಯನ್ನು ಸುಧಾರಿಸಿಕೊಳ್ಳುವ ಪ್ರಯತ್ನ ಇಲ್ಲಿ ನಡೆದಿದೆ.

	ಭಾರತದಲ್ಲಿ ಹಿಂದೆ ನಡೆಯುತ್ತಿದ್ದ ನೀರಾವರಿ ಕೆಲಸಗಳು ಮೂರು ಬಗೆಯವು:

	(1) ನದಿಗೆ ಅಡ್ಡವಾಗಿ ನಿರ್ಮಿಸಿದ ಅಣೆಕಟ್ಟಿನಿಂದ ತೆಗೆದ ನಾಲೆ; (2) ಮಳೆಗಾಲದಲ್ಲಿ ಹಳ್ಳಗಳಲ್ಲಿ ಹರಿದ ನೀರನ್ನು ಮಣ್ಣಿನ ಏರಿ ನಿರ್ಮಿಸಿ ತೂಬಿನ ಮೂಲಕ ನಾಲೆಗಳಿಂದ ಗದ್ದೆಗಳಿಗೆ ಸಾಗಿಸುವ ಏರ್ಪಾಡಿನ ಕೆರೆ ವ್ಯವಸ್ಥೆ: (3) ನೀರಾವರಿಯ ಜೊತೆಗೆ ಕುಡಿಯುವ ನೀರಿಗಾಗಿ ಬಾವಿಗಳನ್ನು ತೋಡುವುದು. ಈ ಕೆಲಸಗಳಿಗೆ ಅಂದಿನ ರಾಜರು ಮಾತ್ರವಲ್ಲದೆ ಸಾರ್ವಜನಿಕರೂ ಹಣ ವಿನಿಯೋಗಿಸುತ್ತಿದ್ದರು. ನೀರಾವರಿ ಒಂದು ಭಾಗವಾಗಿದ್ದ ವಿವಿಧೋದ್ದೇಶ ಯೋಜನೆಗಳ ಉದ್ದೇಶ ವಿದ್ಯುದುತ್ಪಾದನೆ, ಪ್ರವಾಹ ನಿಯಂತ್ರಣ, ಕೈಗಾರಿಕೆಗಳ ಬೆಳವಣಿಗೆ ಮತ್ತು ವಿಹಾರಾನುಕೂಲತೆಗಳನ್ನು ಕಲ್ಪಿಸುವಿಕೆ. ಅಂದಿನ ಮೈಸೂರಿನ ಶಿಲ್ಪಿಯಾಗಿದ್ದ. ಸರ್. ಎಂ. ವಿಶ್ವೇಶ್ವರಯ್ಯನವರು 1911ರಲ್ಲಿ ಪ್ರಾರಂಭಿಸಿದ ಕೃಷ್ಣರಾಜಸಾಗರ ಪ್ರಪಂಚದಲ್ಲೇ ಮೊತ್ತಮೊದಲನೆಯ ವಿವಿಧೋದ್ದೇಶ ಯೋಜನೆಯಾಯಿತು.

	ಹತ್ತೊಂಬತ್ತನೆಯ ಶತಮಾನದ ಬ್ರಿಟಿಷರ ಆಳ್ವಿಕೆಯ ದಿನಗಳಿಂದ ಭಾರತದಲ್ಲಿ ಹೊಸ ಹೊಸ ನಮೂನೆಯ ನೀರಾವರಿ ಕೆಲಸಗಳು ಕಾರ್ಯರೂಪಕ್ಕೆ ಬಂದುವು. ಇದಕ್ಕೆ ಮುಂಚೆ ಆದ ನೀರಾವರಿ ಕೆಲಸಗಳ ಪೈಕಿ ಕಾವೇರಿ, ಗೋದಾವರಿ ಮತ್ತು ಕೃಷ್ಣಾ ನದಿಗಳಿಗೆ ಕಟ್ಟಿದ ಆಣೆಕಟ್ಟುಗಳು ಮತ್ತು ಅವುಗಳಿಂದ ಹೊರಡುವ ನಾಲೆಗಳ ನಿರ್ಮಾಣ, ಯಮುನಾನದಿಯಿಂದ ತೆಗೆದ ಎರಡು ನಾಲೆಗಳು, ಸಿಂಧು ಮತ್ತು ಅದರ ಉಪನದಿಗಳಿಂದ ತೆಗೆದ ಪ್ರವಾಹದ ನಾಲೆಗಳು ಮುಖ್ಯವಾದವು. ಕ್ರಿ. ಶ. 2ನೆಯ ಶತಮಾನದಲ್ಲಿ ಕಾವೇರಿ ನದಿಗೆ ಅಡ್ಡವಾಗಿ ಕಟ್ಟಿದ ಅದಿಮಗ್ರ್ಯಾಂಡ್ ಆಣೆಕಟ್ಟು ಒಂದು ಅದ್ಭುತ ಕೆಲಸ. ಅಲ್ಲಿಯ ಜಲಾಶಯದಿಂದ ತಮಿಳುನಾಡು ರಾಜ್ಯದ ತಂಜಾವೂರು ಜಿಲ್ಲೆಯ ಕಾವೇರಿ ಮುಖಜಭೂಮಿ ಸಮೃದ್ಧ ಪ್ರದೇಶವಾಯಿತು.
	ಭಾರತದಲ್ಲಿ ಹಿಂದೆ ದೊಡ್ಡ ದೊಡ್ಡ ನದಿಗಳ ಅಡ್ಡ ಅಣೆಕಟ್ಟುಗಳನ್ನು ನಿರ್ಮಿಸುವ ಹೊಣೆಗಾರಿಕೆಯನ್ನು ಹೊತ್ತುಕೊಂಡ ಬ್ರಿಟಿಷ್ ಶಿಲ್ಪಿಗಳ ಪೈಕಿ ಅರ್ಥರ್ ಕಾಟನ್ ಪ್ರೋಬಿ ಕೌಟ್ಲೆ ಮತ್ತು ಕರ್ನಲ್ ಪೆನಿಕ್ವಿಕಾ ಪ್ರಮುಖರು. ಇವರ ಪ್ರಯತ್ನದ ಫಲವಾಗಿ ಕಾವೇರಿ ನದಿಗೆ ಅಡ್ಡವಾಗಿ ಕೊಲ್ಲಡಮ್ ಮೇಲೆ ಗ್ರ್ಯಾಂಡ್ ಅಣೆಕಟ್ಟು, ಅಣೆಕಟ್ಟು, ಗೋದಾವರಿ ನದಿಗೆ ಅಡ್ಡ ಧವಳೇಶ್ವರದಲ್ಲಿ ಅಣೆಕಟ್ಟು, ಕೃಷ್ಣಾ ನದಿಗೆ ಅಡ್ಡ ವಿಜಯವಾಡದಲ್ಲಿ ಕಟ್ಟೆ. ಉತ್ತರಭಾರತದಲ್ಲಿ ಯಮುನಾ ನದಿಯ ಬಲದಂಡೆ ನಾಲೆ, ಹರಿದ್ವಾರದ ಬಳಿ ಅಣೆಕಟ್ಟು, ರೂರ್ಕಿಯ ಬಳಿಯಲ್ಲಿ ಸೋಲಾನಿ ಮೇಲುಗಾಲವೆ ಈ ಮುಂತಾದ ಕೆಲಸಗಳು ಆದುವು.

	ಉತ್ತರ ಭಾರತದ ಗಂಗಾನದಿಯಲ್ಲಿ ಹರಿಯುವ ಒಟ್ಟು ನೀರಿನ ಅತ್ಯಲ್ಪಭಾಗ ನೀರಾವರಿಗೆ ಬಳಕೆಯಾಗುತ್ತಿತ್ತು. ಕಾಶೀಕ್ಷೇತ್ರದ ಮೇಲುಗಡೆ ಗಂಗಾ ಮತ್ತು ಯಮುನಾ ನದಿಗಳ ನೀರನ್ನು ಅಪ್ರತಿಮ ಶಿಲ್ಪಕೌಶಲದಿಂದ ಬಳಸಿಕೊಂಡಿದ್ದಾರೆ ಹಿಮಾಲಯದ ಮೇಲಿನ ಮಂಜು, ಬೇಸಿಗೆಯಲ್ಲಿ ಕರಗಿ ನೀರಾಗುತ್ತದೆ. ಅಂತೆಯೇ ಮಳೆಗಾಲದಲ್ಲಿ ಬೀಳುವ ಮಳೆಯಿಂದ ನೀರು ಪೂರೈಕೆ ಆಗುತ್ತದೆ. ಆದರೆ ಈ ಜಲಸಮೃದ್ಧಿಯ ಶೇಕಡಾ 3 ರಿಂದ 6ರಷ್ಟನ್ನು ಮಾತ್ರ ಬಳಸುವುದು ಸಾಧ್ಯವಾಗಿದೆ. ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಭಾರತದ ಕಾವೇರಿ, ಪೆನ್ನಾರ್, ಪಾಲಾರ್, ಕೃಷ್ಣಾ, ಗೋದಾವರಿ, ಪಶ್ಚಿಮ ತೀರದ ನದಿಗಳು, ನರ್ಮದಾ, ತಪತಿ, ಮಹಾನದಿ, ಕಾಶೀಕ್ಷೇತ್ರದ ಮೇಲುಭಾಗದ ಹಾಗೂ ಕೆಳಭಾಗದ ಗಂಗಾನದಿ, ಸಿಂಧು ಮೊದಲಾದ ನದೀಕಣಿವೆಗಳಲ್ಲಿಯ ನೀರನ್ನು ಯುಕ್ತವಾಗಿ ನೀರಾವರಿಗಾಗಿ ಬಳಸಲಾಗುತ್ತಿದೆ.

	ಭಾರತದ ನೀರಾವರಿಯ ಕಾಮಗಾರಿಗಳನ್ನು ಕೆರೆಗಳು, ಅಣೆಕಟ್ಟುಗಳು ಮತ್ತು ಕಲ್ಲು ಗಾರೆಯ ಇಲ್ಲವೆ ಕಾಂಕ್ರೀಟಿನ ಕಟ್ಟೆಗಳು ಎಂದು ಮೂರು ವಿಧವಾಗಿ ವಿಂಗಡಿಸಲಾಗಿದೆ. ದಕ್ಷಿಣ ಭಾರತದಲ್ಲಿ ಒಂದು ಹಳ್ಳಕ್ಕೆ ಅಡ್ಡವಾಗಿ ಒಂದರ ಕೆಳಗೆ ಇನ್ನೊಂದು ಕೆರೆಯನ್ನು ಕಟ್ಟುವುದು ರೂಢಿ. ಮೇಲಿನ ಕೆರೆಯ ಕೋಡಿಯಲ್ಲಿ ಬಿದ್ದ ನೀರು ಕೆಳಗಿನ ಕೆರೆಗೆ ಹರಿಯುತ್ತದೆ. ಇಂಥ ಕೆರೆಗಳಿಗೆ ಸರಪಳಿ ಕೆರೆಗಳು ಎಂದರು. ಹೊಳೆಯಲ್ಲಿ ಹರಿಯುವ ನೀರನ್ನು ನೀರಾವರಿಗೆ ಎರಡು ಬಗೆಯ ಕಟ್ಟಡಗಳಿಂದ ಪೂರೈಸಿಕೊಳ್ಳುತ್ತಾರೆ. ಒಂದರಲ್ಲಿ ಹೊಳೆಯ ನೀರನ್ನೇ ನಾಲೆಯ ಕಡೆಗೆ ತಿರುಗಿಸುವುದಿದೆ. ಇನ್ನೊಂದರಲ್ಲಿ ನೀರನ್ನು ಕಟ್ಟೆಯಲ್ಲಿ ಕೂಡಿಡುತ್ತಾರೆ. ನೀರನ್ನು ಹೊಳೆಯಿಂದ ತಿರುಗಿಸುವ ಕಟ್ಟಡವೇ ಅಣೆಕಟ್ಟು. ಕಲ್ಲುಗಾರೆಯ ಕಟ್ಟೆಯ ಮೇಲ್ಭಾಗದಲ್ಲಿ ಹೊಳೆಯ ನೀರು ಶೇಖರಗೊಂಡು ಜಲಾಶಯ ಏರ್ಪಡುತ್ತದೆ. ಜಲಾಶಯಕ್ಕೆ ಸಂಬಂಧಿಸಿದಂತೆ ಕಟ್ಟೆ, ಮಳೆಗಾಲದಲ್ಲಿ ಹೆಚ್ಚಾಗಿ ಬಂದ ನೀರನ್ನು ಆಚೆಗೆ ಸಾಗಿಸಲು ಕೋಡಿ, ಕೂಡಿಟ್ಟ ನೀರನ್ನು ನಾಲೆಗೆ ಬಿಡಲು ತೂಬು, ಪ್ರವಾಹದಲ್ಲಿ ಬರುವ ಗೋಡುಮಣ್ಣನ್ನು ಸಾಗಿಸಲು ತಗ್ಗಿನ ಮಟ್ಟದಲ್ಲಿ ಕದಗಳು, ವಿದ್ಯುದುತ್ಪಾದನೆಗಾಗಿ ನೀರನ್ನು ಸಾಗಿಸುವ ತೂಬುಗಳು ಇದೆಲ್ಲ ಇರುತ್ತವೆ. ಈ ದೇಶದಲ್ಲಿಯ ನೀರಾವರಿ ಕೆಲಸಗಳಲ್ಲಿ ಇವೆಲ್ಲ ಪ್ರಮುಖಪಾತ್ರ ವಹಿಸುತ್ತವೆ.

	ಅಣೆಕಟ್ಟಿನ ಅಥವಾ ಕಟ್ಟೆಯ ತೂಬಿನಿಂದ ಹೊರಬಂದ ನೀರು, ನಾಲೆಗಳ ಮಾರ್ಗವಾಗಿ ಸಾಗುವಳಿಯಾಗಬೇಕಾದ ಜಮೀನನ್ನು ತಲುಪುತ್ತದೆ. ಕಾವೇರಿನದಿಗೆ ಅಡ್ಡವಾಗಿ ಕೃಷ್ಣರಾಜಸಾಗರದ ಕಟ್ಟೆಯ ಎಡದಂಡೆಯಿಂದ ಹೊರಡುವ ವಿಶ್ವೇಶ್ವರಯ್ಯ ನಾಲೆ, ಮತ್ತು ಬಲದಂಡೆಯಿಂದ ಹೊರಡುವ ವರುಣನಾಲೆಗಳನ್ನು ಇಲ್ಲಿ ಹೆಸರಿಸಬಹುದು. ನಾಲೆಗಳ ಅಡ್ಡ ಬರುವ ಹಳ್ಳಗಳ ನೀರನ್ನು ಸಾಗಿಸುವ ನಿರ್ಮಾಣಗಳು ಎಂದರೆ ಮೇಲುಗಾಲುವೆ (ಅಕ್ವಡಕ್ಟ್), ಕೆಳಗಾಲುವೆ (ಸೂಪರ್ ಪ್ಯಾಸೇಜ್), ಸೈಫನ್, ಮೇಲುಗಾಲುವೆ, ಮಟ್ಟದಾಟು (ಲೆವೆಲ್ ಕ್ರಾಸಿಂಗ್), ಒಳಗಂಡಿ, ಹೊರಗಂಡಿ ಮತ್ತು ಮಳೆಯ ನೀರಿನ ಚರಂಡಿ, ಭಾರತದಲ್ಲಿ ನೀರಾವರಿಗೆ ಸಂಬಂಧಿಸಿದಂತೆ ಈ ನಿರ್ಮಾಣಗಳ ಪಾತ್ರ ಹಿರಿದು.

	ಸಾಮಾನ್ಯವಾಗಿ ನೀರಾವರಿ ನಾಲೆಗಳಲ್ಲಿ ಜಲಸಂಚಾರ ಏರ್ಪಡಿಸುವುದು ಕಷ್ಟ ಸಾಧ್ಯ. ಕೃಷ್ಣಾ ಮತ್ತು ಗೋದಾವರಿ ನದಿಗಳ ಮುಖಜಭೂಮಿಗಳಲ್ಲಿ ನೀರಾವರಿಯ ಕಾಲುವೆಗಳನ್ನು ಕೊಂಚ ಬದಲಾವಣೆ ಮಾಡಿ ಜಲಸಂಚಾರದ ಸೌಲಭ್ಯ ಕಲ್ಪಿಸಲಾಗಿದೆ. ಜಲಸಂಚಾರದ ಏರ್ಪಾಡಿಗೆ ಸಂಬಂಧಿಸಿದಂತೆ ನಾಲೆಯಲ್ಲಿ ಪಾತವಿರುವೆಡೆ ಮಟ್ಟ ಬದಲಾವಣೆಯ ಕಟ್ಟೆ (ಲಾಕ್), ನಿಯಂತ್ರಕದೊಂದಿಗೆ ಸೇರಿದ ಪಾತ (ಲಾಕ್ ವಿಯರ್), ಕೋಡಿಗಳ ಮತ್ತು ತೂಬುಗಳ ಬಳಿ ಅಸರೆಯ ದಿಮ್ಮಿ (ಪೆಂಡರ್ ಫೈಲ್), ನಾಲೆಯುದ್ಧಕ್ಕೂ ದೋಣಿಯನ್ನು ಎಳೆಯುವ ದಾರಿ (ಟೋ ಪಾತ್), ನಾಲೆಯ ಸೇತುವೆಗಳಲ್ಲಿ ಅಗಲದ ಕಣ್ಣು ಮತ್ತು ಹೆಚ್ಚಿನ ಎತ್ತರದ ಏರ್ಪಾಡು, ನಿಯಂತ್ರಕ ಪಾತದ ಮೇಲೆ ಪ್ರತ್ಯೇಕ ಸೇತುವೆ ಇವೆಲ್ಲ ಇರುತ್ತವೆ.

	ಭಾರತ ಸರ್ಕಾರದ ನೀರಾವರಿ ಸಚಿವಖಾತೆಯ ನೇರ ನೇತೃತ್ವದಲ್ಲಿ ಭಾರತದ ನೀರಾವರಿಗೆ ಸಂಬಂಧಿಸಿದಂತೆ ವರ್ಷದ ವಿವಿಧ ಅವಧಿಗಳಲ್ಲಿಯ ಬೆಳೆಗಳಿಗೆ ಅಗತ್ಯವಾದ ನೀರನ್ನು ಒದಗಿಸುವುದು, ಅಶ್ರಾಯಿಕ ಪರಿಸ್ಥಿತಿಗಳಲ್ಲಿ ನೀರ್ಗಾಲುವೆಗಳ ಏರ್ಪಾಡು ಮತ್ತು ಅಧಿಕ ನೀರಿನ ಯುಕ್ತ ವಿಲೇವಾರಿ, ಪ್ರವಾಹಗಳಿಂದ ಉಂಟಾಗುವ ಅಪಘಾತಗಳನ್ನು ತಡೆಯುವುದು, ಬೇಸಗೆಯ ದಿನಗಳಲ್ಲಿ ಬಳಸಿ ಕೊಳ್ಳುವ ಸಲುವಾಗಿ ನೀರಿನ ಶೇಖರಣೆ, ಉನ್ನತ ಪ್ರದೇಶಗಳಲ್ಲಿ ಮಣ್ಣಿನ ಸಂರಕ್ಷಣೆ ಮತ್ತು ಕರಾವಳಿ ತೀರ ಪ್ರದೇಶಗಳಲ್ಲಿ ಸಮುದ್ರದ ನೀರಿನಿಂದ ಉಂಟಾಗುವ ಕ್ಷಯವನ್ನು ತಡೆಗಟ್ಟುವುದು ಮುಂತಾದವೆಲ್ಲ ನಡೆಯುತ್ತವೆ.

	ಭಾರತದಲ್ಲಿ ಯಥೇಚ್ಛ ಜಲಾಕರಗಳು ಇವೆ. ದೇಶದ ಜಲಾಕರಗಳ ಒಟ್ಟು ಮೊತ್ತ 178 ಮಿಲಿಯನ್ ಹೆಕ್ಟೇರ್ ಮೀಟರುಗಳು ಎಂದು ಅಂದಾಜು ಮಾಡಲಾಗಿದೆ. ಭೂಲಕ್ಷಣ, ಮೇಲ್ಮೈ ಲಕ್ಷಣ ಭೂ ವೃತ್ತಾಂತ, ಅಶ್ರಯ ಸಾಮಥ್ರ್ಯ, ಲಭ್ಯ ತಂತ್ರವಿದ್ಯೆಯ ಪರಿಮಾಣ, ಹಾಗೂ ಪ್ರಸ್ತುತ ಸ್ಥಿತಿ ಇವುಗಳ ಪರಮಿತಿಗಳಿಂದಾಗಿ ಈ ಮೊತ್ತದ ಸ್ವಲ್ಪಭಾಗ ಮಾತ್ರ ಬಳಕೆಯಾಗಿದೆ. ಮೇಲ್ಮೈ ನೀರಿನ ಸುಮಾರು 67 ಮಿಲಿಯನ್ ಹೆಕ್ಟೇರ್ ಮೀಟರುಗಳು ಮತ್ತು ಭೂ ಜಲನೀರಿನ 26.5 ಮಿಲಿಯನ್ ಹೆಕ್ಟೇರುಗಳಷ್ಟು ಭಾಗವನ್ನು ಮಾತ್ರ ಕಾರ್ಯಾನುಕೂಲಿಸಿಕೊಂಡು ಬಳಸಿಕೊಳ್ಳಬಹುದಾಗಿದೆ. ನೀರಾವರಿ ಸಾಮಥ್ರ್ಯದ ಪೂರ್ಣಾಭಿವೃದ್ಧಿಯಾದ ಮೇಲಿನ 210 ಮಿಲಿಯನ್ ಹೆಕ್ಟೇರುಗಳಲ್ಲಿಯ ಬೆಳೆ ತೆಗೆಯಬಹುದಾದ ಒಟ್ಟು ಸಾಧ್ಯ ಪ್ರದೇಶದ ಪೈಕಿ ಸುಮಾರು 113 ಮಿಲಿಯನ್ ಹೆಕ್ಟೇರುಗಳಷ್ಟು ಪ್ರದೇಶವನ್ನು ಅಂತಿಮವಾಗಿ ನೀರಾವರಿಗೆ ಒಳಪಡಿಸಬಹುದೆಂದು ಅಂದಾಜು ಮಾಡಲಾಗಿದೆ.

	ಕೇಂದ್ರ ಸರ್ಕಾರದ ನೀರಾವರಿ ಸಚಿವಖಾತೆ ಕೇಂದ್ರ ಜಲ ಆಯೋಗದೊಡನೆ ಸಮಾಲೋಚಿಸಿ, ಶಕ್ಯವೆಂದು ಕಂಡುಬರುವಂಥ ವಿವಿಧ ನದಿಗಳ ಬಳಿ ಅತ್ಯಧಿಕ ಸಾಮಥ್ರ್ಯದ ಜಲಾಶಯಗಳನ್ನು ನಿರ್ಮಿಸಲು ಮತ್ತು ಒಂದರೊಡನೊಂದು ಸಂಪರ್ಕ ಕಲ್ಪಿಸುವಂಥ ವ್ಯವಸ್ಥೆಗಳನ್ನು ನಿರ್ಮಾಣ ಮಾಡುವುದರಿಂದ ನೀರಿನ ಕೊರತೆ ಇರುವ ಸ್ಥಳಗಳಲ್ಲಿ ಬಳಸಿಕೊಳ್ಳಬಹುದಾದಂಥ ಹೆಚ್ಚುವರಿ ನೀರನ್ನು ಉಪಯೋಗಿಸಿಕೊಳ್ಳಲು ಅನುಕೂಲವಾಗುವಂಥ ಜಲಾಕರಗಳ ಅಭಿವೃದ್ಧಿಗಾಗಿ ರಾಷ್ಟ್ರೀಯ ಪೂರ್ವೇಕ್ಷಣಾ ಯೋಜನೆಯೊಂದನ್ನು ರೂಪಿಸಿಕೊಂಡಿದೆ. ಈ ಪೂರ್ವೇಕ್ಷಣೆಯಲ್ಲಿ ಎರಡು ಮುಖ್ಯ ಘಟಕಗಳಿವೆ: ಹಿಮಾಲಯ ಪರ್ವತದ ನದಿಗಳ ಅಭಿವೃದ್ಧಿ, ಪರ್ಯಾಯದ್ವೀಪದ ನದಿಗಳ ಅಭಿವೃದ್ಧಿ.

	ಪರ್ಯಾಯದ್ವೀಪದ ನದಿಗಳ ಅಭಿವೃದ್ಧಿ ಕಾರ್ಯದಲ್ಲಿ ನಾಲ್ಕು ಪ್ರಧಾನ ಭಾಗಗಳಿವೆ:

	1 ಮಹಾನದಿ-ಗೋದಾವರಿ-ಕೃಷ್ಣಾ-ಪೆನ್ನಾರ್-ಕಾವೇರಿ ಈ ನದಿಗಳ ನಡುವೆ ಸಂಪರ್ಕ ಕಲ್ಪಿಸುವುದು.

	2 ಮುಂಬೈನ ಉತ್ತರಕ್ಕೆ ಮತ್ತು ತಾಪಿನದಿಯ ದಕ್ಷಿಣಕ್ಕೆ, ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ನಡುವೆ ಸಂಪರ್ಕ ಕಲ್ಪಿಸುವುದು.

	3 ಕೆನ್ ಮತ್ತು ಚಂಬಲ್ ನದಿಗಳ ನಡುವೆ ಸಂಪರ್ಕ ಏರ್ಪಡಿಸುವುದು.

	4 ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ದಿಶಾಬದಲಾವಣೆ.

	ಈ ಎಲ್ಲ ಕಾರ್ಯಗಳ ಒಟ್ಟು ವೆಚ್ಚ ಸುಮಾರು 50,000 ಕೋಟಿ ರೂಪಾಯಿಗಳು ಎಂದು ಈ ಮುಂಚೆ ಅಂದಾಜುಮಾಡಲಾಗಿತ್ತು. ಇದರಿಂದಾಗಿ ನೆಲದ ಮೇಲ್ಮೈ ನೀರಿನ 25 ಮಿಲಿಯನ್ ಹೆಕ್ಟೇರುಗಳಷ್ಟು ಪ್ರದೇಶ ಮತ್ತು ಭೂಜಲದ ಅಧಿಕ ಬಳಕೆಯಿಂದ 10 ಮಿಲಿಯನ್ ಹೆಕ್ಟೇರುಗಳಷ್ಟು ಪ್ರದೇಶ ನೀರಾವರಿಗೆ ಒಳಪಡುವುವೆಂದು ನಿರೀಕ್ಷಿಸಲಾಗಿತ್ತು. ಇದಲ್ಲದೇ 40 ಮಿಲಿಯನ್ ಕಿಲೊವಾಟುಗಳಷ್ಟು ವಿದ್ಯುಚ್ಛಕ್ತಿ ಉತ್ಪಾದನೆ, ಪ್ರವಾಹ ನಿಯಂತ್ರಣ, ನೌಕಾ ಸಂಚಾರದ ಅನುಕೂಲಗಳೂ ಇದಕ್ಕಿವೆ.

	ಮುಂಗಾರು ಮಳೆಯ ಅನಿಶ್ಚಿತತೆಯಿಂದಾಗಿ ನೀರಾವರಿ ಯೋಜನೆಗೆ ಅಧಿಕ ಪ್ರಾಶಸ್ತ್ಯ ನೀಡಲಾಗಿದೆ.

	ಭಾರತದ ನೀರಾವರಿ ಯೋಜನೆಗಳನ್ನು ಸ್ಥೂಲವಾಗಿ ದೊಡ್ಡ, ಮಧ್ಯಮ ಮತ್ತು ಸಣ್ಣ ಪರಿಮಾಣದವು ಎಂದು ವಿಂಗಡಿಸಲಾಗಿತ್ತು. ಇವುಗಳಿಗೆ ತಗಲುವ ಅಂದಾಜು ವೆಚ್ಚವನ್ನು ಆಧರಿಸಿ ವರ್ಗೀಕರಣವೂ ನಡೆದಿತ್ತು. ಐದು ಕೋಟಿ ರೂಪಾಯಿಗಳಿಗಿಂತ ಹೆಚ್ಚು ವೆಚ್ಚವನ್ನು ದೊಡ್ಡ ಯೋಜನೆಯೆಂದೂ, 15 ಲಕ್ಷ ರೂಪಾಯಿಗಳಿಂದ 5 ಕೋಟಿ ರೂಪಾಯಿಗಳ ವೆಚ್ಚದವನ್ನು ಮಧ್ಯಮಯೋಜನೆಯೆಂದೂ 15 ಲಕ್ಷ ರೂಪಾಯಿಗಳಿಗಿಂತಲೂ ಕಡಿಮೆ ವೆಚ್ಚವನ್ನು ಸಣ್ಣ ಪರಿಮಾಣದ ಯೋಜನೆಯೆಂದೂ ಕರೆದಿತ್ತು. 1978-79ರಿಂದ ಈ ವರ್ಗೀಕರಣವನ್ನು ತಿದ್ದಿ 10,000 ಹೆಕ್ಟೇರುಗಳಿಗಿಂತ ಹೆಚ್ಚಿನ ಭೂಮಿಗೆ ನೀರು ಪೂರೈಕೆ ಸಾಮಥ್ರ್ಯ ಹೊಂದಿರುವುದನ್ನು ದೊಡ್ಡ ಯೋಜನೆಗಳೆಂದೂ, 2000 ಹೆಕ್ಟೇರುಗಳಿಗಿಂತ ಅಧಿಕ ಮತ್ತು 10,000 ಹೆಕ್ಟೇರುಗಳಿಗಿಂತ ಕಡಿಮೆ ಭೂಮಿಗೆ ನೀರು ಪೂರೈಸುವ ಸಾಮಥ್ರ್ಯಹೊಂದಿರುವವನ್ನು ಮಧ್ಯಮ ಯೋಜನೆಗಳೆಂದೂ 2000 ಹೆಕ್ಟೇರುಗಳಿಗಿಂತ ಕಡಿಮೆ ಭೂಮಿಗೆ ನೀರುಪೂರೈಕೆ ಸಾಮಥ್ರ್ಯ ಹೊಂದಿರುವುವನ್ನು ಸಣ್ಣ ಪರಿಮಾಣದ ಯೋಜನೆಗಳೆಂದೂ ಕರೆಯಲಾಗಿದೆ.

    1951ಕ್ಕೆ ಮುಂಚೆ ನಾಡಿನಲ್ಲಿ ನೀರಾವರಿ 22.6 ಮಿಲಿಯನ್ ಹೆಕ್ಟೇರ್ ಇತ್ತು. ಇದರಲ್ಲಿ 9.7 ಮಿಲಿಯನ್ ಹೆಕ್ಟೇರ್ ಪ್ರದೇಶಗಳ ದೊಡ್ಡ ಮತ್ತು ಮಧ್ಯಮ ಪರಿಮಾಣದ ನೀರಾವರಿ ಯೋಜನೆಗಳದ್ದು; 12.9 ಮಿಲಿಯನ್ ಹೆಕ್ಟೇರ್ ಪ್ರದೇಶಗಳು ಅಲ್ಪ ಪ್ರಮಾಣದ (ಮೇಲ್ಮೈ ಜಲ ಮತ್ತು ಭೂಜಲ) ಯೋಜನೆಗಳದ್ದು. ಐದನೆಯ ಪಂಚವಾರ್ಷಿಕ ಯೋಜನೆಯ ಅಂತ್ಯದ ವೇಳೆಗೆ (1977-78) ನೀರಾವರಿ ಸಾಮಥ್ರ್ಯ 52.1 ಮಿಲಿಯನ್ ಹೆಕ್ಟೇರುಗಳಿಗೆ ಹೆಚ್ಚಿತು. ಇದರಲ್ಲಿ ದೊಡ್ಡ ಮತ್ತು ಮಧ್ಯಮ ಪರಿಮಾಣದ ಯೋಜನೆಗಳ ಸಾಮಥ್ರ್ಯ 27.3 ಮಿಲಿಯನ್ ಹೆಕ್ಟೇರುಗಳು. 1978 ಮತ್ತು 1980 ನಡುವೆ 4-5 ಮಿಲಿಯನ್ ಹೆಕ್ಟೇರುಗಳಷ್ಟು ಹೆಚ್ಚಿನ ಸಾಮಥ್ರ್ಯ ಕಲ್ಪಿಸಲಾಯಿತು. ಇದರಲ್ಲಿ ದೊಡ್ಡ ಮತ್ತು ಮಧ್ಯಮ ಗಾತ್ರದ ನೀರಾವರಿ ಯೋಜನೆಗಳದ್ದು 1.8 ಮಿಲಿಯನ್ ಹೆಕ್ಟೇರುಗಳು ಮತ್ತು ಅಲ್ಪಪರಿಮಾಣದ ಯೋಜನೆಗಳದ್ದು 2.7 ಮಿಲಿಯನ್ ಹೆಕ್ಟೇರುಗಳು. 1979-80ರ ಅವಧಿಯ ಅಂತ್ಯದ ವೇಳೆಗೆ (ಆರನೆಯ ಪಂಚವಾರ್ಷಿಕ ಯೋಜನೆಯ ಆರಂಭ) ಒಟ್ಟು ನೀರಾವರಿ ಸಾಮಥ್ರ್ಯ 56-6 ಮಿಲಿಯನ್ ಹೆಕ್ಟೇರುಗಳಷ್ಟು ಇತ್ತು. 1980-81ರ ಸಾಲಿನಲ್ಲಿ 58.9 ಮಿಲಿಯನ್ ಹೆಕ್ಟೇರುಗಳಾಯಿತು. 1981-82ರ ಉದ್ದೇಶಿತ ಸಾಮಥ್ರ್ಯ 2.63 ಮಿಲಿಯನ್ ಹೆಕ್ಟೇರುಗಳು.

	ದೀರ್ಘಾವಧಿ ಉದ್ದೇಶಕ್ಕೆ ಅನುಗುಣವಾಗಿ 1980-81ರಿಂದ ಆರಂಭವಾದ ಆರನೆಯ ಪಂಚವಾರ್ಷಿಕ ಯೋಜನೆಯಲ್ಲಿ ಸುಮಾರು 14 ಮಿಲಿಯನ್ ಹೆಕ್ಟೇರುಗಳಷ್ಟು ಹೆಚ್ಚಿನ ನೀರಾವರಿ ಸಾಮಥ್ರ್ಯ ಉಂಟುಮಾಡುವ ಉದ್ದೇಶವಿತ್ತು. ದೊಡ್ಡ, ಮಧ್ಯಮ ಮತ್ತು ಸಣ್ಣ ಪರಿಮಾಣದ ನೀರಾವರಿ ಯೋಜನೆಗಳಿಗೆ ತಗಲುವ ಖರ್ಚು 10258 ಕೋಟಿರೂಪಾಯಿಗಳು. ಇದಲ್ಲದೆ ಸಣ್ಣ ಪರಿಮಾಣದ ಯೋಜನೆಗಳಿಗಾಗಿ ಸಂಸ್ಥೆಗಳು ಒದಗಿಸುವ ಆಕರಗಳಿಂದ ಸುಮಾರು 1700 ಕೋಟಿರೂಪಾಯಿಗಳು ಲಭಿಸುವ ನಿರೀಕ್ಷೆ ಇತ್ತು. ಇದರಿಂದ ಸಮಗ್ರಯೋಜನೆಗಳಿಗೆ ತಗಲುವ ಒಟ್ಟು ಖರ್ಚು ಸುಮಾರು 12,000 ಕೋಟಿ ರೂಪಾಯಿಗಳು, ನೀರಾವರಿಗೆ ಭೂಮಿಗಳಿಂದ ಉತ್ಪನ್ನಗಳನ್ನು ಹೆಚ್ಚಿಸಲು ನಿಯಂತ್ರಣ ಪ್ರದೇಶ ಅಭಿವೃದ್ಧಿ (ಕಮಾಂಡ್ ಏರಿಯ ಡೆವಲಪ್‍ಮೆಂಟ್) ಯೋಜನೆ ರೂಪಿತವಾಗಿದೆ. ಆರನೆಯ ಪಂಚವಾರ್ಷಿಕ ಯೋಜನೆಯಲ್ಲಿ ಇದಕ್ಕಾಗಿ 865 ಕೋಟಿ ರೂಪಾಯಿಗಳನ್ನು ಒದಗಿಸಲಾಗಿತ್ತು.

	ಭಾರತದಲ್ಲಿ ಮುಖ್ಯವಾಗಿ ಮೂರು ಪ್ರಕಾರದ ನೀರಾವರಿ ಸೌಲಭ್ಯಗಳಿವೆ: ಬಾವಿಗಳು, ಕೆರೆಗಳು ಮತ್ತು ನದಿ ಕಾಲುವೆಗಳು.          

	1 ಬಾವಿಗಳಿಂದ ನೀರಾವರಿ: ಬಾವಿಗಳನ್ನು ತೋಡಿ, ನೀರೆತ್ತಿ ಹೊಲಗಳಿಗೆ ನೀರು ಪೂರೈಸಿಕೊಳ್ಳುವುದು ಭಾರತದಲ್ಲಿ ಬಲು ಪ್ರಾಚೀನದಿಂದಲೂ ರೂಢಿಯಲ್ಲಿದೆ. ಭಾರತದಲ್ಲಿ 30 ಲಕ್ಷಕ್ಕೂ ಹೆಚ್ಚಿನ ಬಾವಿಗಳಿಂದ ನೀರಾವರಿ ಆಗುತ್ತಿದೆ. ಸಾಮಾನ್ಯವಾಗಿ ಒಂದು ಬಾವಿ ಸುಮಾರು 1.82 ಹೆಕ್ಟೇರ್ ಭೂಮಿಗೆ ನೀರನ್ನು ಒದಗಿಸಬಲ್ಲದು. ಬಾವಿ ತೋಡಲು ಸರ್ಕಾರ ನೆರವಾಗುತ್ತದೆ.

	ನೆಲದಲ್ಲಿ ಅಳಕ್ಕೆ ರಂಧ್ರ ಕೊರೆದು ಅಂತರ್ಜಲವನ್ನು ಮೇಲೆತ್ತಿ ನೀರಾವರಿಗೆ ಒದಗಿಸಿಕೊಳ್ಳುವ ಏರ್ಪಾಡೂ ಇದೆ. ಇವಕ್ಕೆ ಕೊಳವೆ ಬಾವಿಗಳು ಅಥವಾ ಟ್ಯೂಬ್‍ವೆಲ್ಸ್ ಎನ್ನುತ್ತಾರೆ. ಇವುಗಳಿಂದ ಹೆಚ್ಚಿನ ನೀರು ಪಡೆಯಬಹುದು. ಭಾರತದಲ್ಲಿ ನೀರಾವರಿ ಸೌಲಭ್ಯವಿರುವ ಒಟ್ಟು ಭೂಮಿಯ 42.7% ರಷ್ಟು ಭಾಗಕ್ಕೆ ಬಾವಿಗಳಿಂದ ನೀರು ಒದಗುತ್ತಿದೆ.

	2 ಕೆರೆಗಳಿಂದ ನೀರಾವರಿ: ಕೆರೆಗಳ ನೀರನ್ನು ಮಳೆಯ ಅಭಾವ ವಿದ್ದಾಗ ನೀರಾವರಿಗೆ ಬಳಸಿಕೊಳ್ಳುವುದಿದೆ. ಕೆಲವು ಸ್ಥಳಗಳಲ್ಲಿ ಚಿಕ್ಕ ಹಳ್ಳಗಳಿಗೆ ಅಣೆಕಟ್ಟು ಕಟ್ಟಿ ದೊಡ್ಡ ಕೆರೆಗಳನ್ನು ನಿರ್ಮಿಸಲಾಗಿದೆ. ಪ್ರಾಕೃತಿಕ ಅನುಕೂಲದ ಕೆರೆಗಳು ದಕ್ಷಿಣ ಭಾರತದಲ್ಲಿ ಹೆಚ್ಚು. ಆಂಧ್ರ ಪ್ರದೇಶ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಒರಿಸ್ಸ ಮತ್ತು ಬಿಹಾರ್ ರಾಜ್ಯಗಳಲ್ಲಿ ಕೆರೆಗಳಿಂದ ನೀರಾವರಿ ಮಾಡುವುದು ರೂಢಿಯಲ್ಲಿದೆ. ಈ ಸೌಲಭ್ಯ ಪಡೆಯುತ್ತಿರುವ ಸುಮಾರು 40 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಸುಮಾರು 20 ಲಕ್ಷ ಹೆಕ್ಟೇರುಗಳಿಗೂ ಹೆಚ್ಚು ಭೂಮಿ ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಲ್ಲಿದೆ. ಅಸ್ಸಾಮ್ ಮತ್ತು ನಾಗಾಲ್ಯಾಂಡುಗಳನ್ನು ಬಿಟ್ಟರೆ ದೇಶದ ಎಲ್ಲ ಭಾಗಗಳಲ್ಲೂ ಕೆರೆಗಳಿವೆ. ತಮಿಳುನಾಡಿನಲ್ಲಿ ಇವುಗಳ ಸಂಖ್ಯೆ ಬಲು ಹೆಚ್ಚು.

	3 ನದಿಕಾಲುವೆಗಳಿಂದ ನೀರಾವರಿ: ಇದು ನದಿಗಳ ಅಡ್ಡ, ಎತ್ತರವಾದ ಸ್ಥಳಗಳಲ್ಲಿ ಅಣೆಕಟ್ಟು ನಿರ್ಮಿಸಿ, ನೀರು ಸಂಗ್ರಹಿಸಿ, ಅದನ್ನು ಕಾಲುವೆಗಳ ಮೂಲಕ ಹೊಲಗದ್ದೆಗಳಿಗೆ ಹಾಯಿಸಿಕೊಳ್ಳುವ ಏರ್ಪಾಡು. ಕಾವೇರಿ ನದಿಗೆ ಅಡ್ಡವಾಗಿ ಕಟ್ಟಿರುವ ಕೃಷ್ಣರಾಜಸಾಗರ, ಮೆಟ್ಟೂರು ಕಟ್ಟೆಗಳು, ತುಂಗಭದ್ರಾ ನದಿಗೆ ಅಡ್ಡವಾಗಿ ನಿರ್ಮಿಸಿರುವ ಅಣೆಕಟ್ಟುಗಳು ದೊಡ್ಡ ಪರಿಮಾಣದ ನೀರಾವರಿ ಏರ್ಪಾಡುಗಳಾಗಿದೆ. ಉತ್ತರ ಪ್ರದೇಶ, ಪಂಜಾಬ್‍ಗಳಲ್ಲಿ ಬೃಹತ್ ಗಾತ್ರದ ನದಿಕಾಲುವೆ ನೀರಾವರಿ ಏರ್ಪಾಡಿವೆ. ಬಿಹಾರ್, ಪಶ್ಚಿಮ ಬಂಗಾಲ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಕೂಡ ನದಿಕಾಲುವೆಗಳಿಂದ ನೀರಾವರಿ ನಡೆಯುತ್ತಿದೆ. ರಾಷ್ಟ್ರೀಯ ಪಂಚವಾರ್ಷಿಕ ಯೋಜನೆಗಳಲ್ಲಿ ಅನೇಕ ವಿವಿಧೋದ್ದೇಶ ನದಿಕಣಿವೆಯೋಜನೆಗಳು ಕಾರ್ಯರೂಪಕ್ಕೆ ಬಂದಿವೆ. ಇವುಗಳಿಂದ ನೀರಿನ ಪೂರೈಕೆ ಮಾತ್ರವಲ್ಲದೆ ವಿದ್ಯುದುತ್ಪಾದನೆ, ಜಲಯಾನ, ಮನರಂಜನೆ, ನೆರೆ ನಿಯಂತ್ರಣ, ಕುಡಿಯುವ ನೀರಿನ ಪೂರೈಕ್ಕೆ ಮೊದಲಾದ ಸೌಲಭ್ಯಗಳೂ ಒದಗಿವೆ.

	ನದೀಕಾಲುವೆಗಳಲ್ಲಿ ಮೂರು ಬಗೆಗಳುಂಟು: ಸರ್ವಕಾಲಿಕ ಕಾಲುವೆಗಳು (ಪೆರಿನಿಯಲ್ ಕೆನಾಲ್ಸ್), ಪ್ರವಾಹ ಕಾಲುವೆಗಳು (ಇನಂಡೇಷನ್ ಕೆನಾಲ್ಸ್) ಮತ್ತು ಶೇಖರಗೊಂಡ ನೀರಿನ ಕಾಲುವೆಗಳು (ಸ್ಟೋರೇಜ್ ವರ್ಕ್ ಕೆನಾಲ್ಸ್), ಸರ್ವಕಾಲಿಕ ಕಾಲುವೆಗಳಿಂದ ಒದಗುವ ನೀರಿನಿಂದ ವರ್ಷದಲ್ಲಿ ಎರಡು ಬೆಳೆತೆಗೆಯಬಹುದು. ನದಿಗಳ ಅಡ್ಡ ದೊಡ್ಡ ಅಣೆಕಟ್ಟು ನಿರ್ಮಿಸಿ ನೀರಾವರಿ ಮತ್ತು ಇನ್ನಿತರ ಉದ್ದೇಶ ಪೂರೈಸಿಕೊಳ್ಳುವ ಪ್ರದೇಶಗಳಲ್ಲಿ ಸರ್ವಕಾಲಿಕ ಕಾಲುವೆಗಳು ಕಾಣಬರುತ್ತದೆ. ನದಿಗಳಲ್ಲಿ ಪ್ರವಾಹ ಬಂದಾಗ ಮಾತ್ರ ತುಂಬಿ ಹರಿಯುವಂಥವು ಪ್ರವಾಹ ಕಾಲುವೆಗಳು. ಪಶ್ಚಿಮಬಂಗಾಲ, ಪೂರ್ವತೀರದ ನದಿಮುಖಜಭೂಮಿ ಪ್ರದೇಶಗಳು, ಬಿಹಾರ ಮೊದಲಾದ ಭಾಗಗಳಲ್ಲಿ ಪ್ರವಾಹ ಕಾಲುವೆಗಳಿವೆ. ಮಳೆಗಾಲದಲ್ಲಿ ನೀರನ್ನು ಶೇಖರಿಸಿ. ಅವಶ್ಯವಿದ್ದಾಗ ಮಾತ್ರ ಕಾಲುವೆಗಳ ಮೂಲಕ ಹರಿಯ ಬಿಡುವ ಕಾಲುವೆಗಳಿಗೆ ಶೇಖರಗೊಂಡ ನೀರಿನ ಕಾಲುವೆಗಳು ಎನ್ನುತ್ತಾರೆ.
	ಭಾರತದ ಬಹುತೇಕ ರಾಜ್ಯಗಳಲ್ಲಿ ನದಿ ಕಾಲುವೆಗಳ ನೀರಾವರಿ ಯೋಜನೆಗಳಿವೆ. ಈ ಕಾಲುವೆಗಳಿಂದ ನೀರಾವರಿ ಸೌಲಭ್ಯ ಪಡೆದುಕೊಳ್ಳುವಲ್ಲಿ ಉತ್ತರ ಪ್ರದೇಶದ್ದು ಪ್ರಥಮಸ್ಥಾನ, ಪಂಜಾಬ್ ರಾಜ್ಯದ್ದು ದ್ವಿತೀಯ ಸ್ಥಾನ. ಹರಿಯಾಣ, ತಮಿಳುನಾಡು, ಪಶ್ಚಿಮ ಬಂಗಾಳಗಳಲ್ಲೂ ನದೀಕಾಲುವೆ ನೀರಾವರಿ ಸೌಲಭ್ಯಗಳಿವೆ. ಬಿಹಾರ, ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ಈ ಸೌಲಭ್ಯ ಕಡಿಮೆ. ಕರ್ನಾಟಕ, ಅಸ್ಸಾಮ್, ಮಹಾರಾಷ್ಟ್ರ, ಒರಿಸ್ಸಾಗಳಲ್ಲಿ ತೀರ ಕಡಿಮೆ. ನಾಡಿನ ಉಳಿದ ರಾಜ್ಯಗಳಲ್ಲಿ ಹೇಳುವಷ್ಟು ಮಟ್ಟಿಗೆ ಇಲ್ಲ.	

	ವಿವಿಧೋದ್ದೇಶ ನದಿಕಣಿವೆ ಯೋಜನೆಗಳು: ಪಂಚವಾರ್ಷಿಕ ಯೋಜನೆಗಳಲ್ಲಿ ಕೃಷಿ ಅಭಿವೃದ್ದಿಗೆ ಅಗತ್ಯದ ನೀರಾವರಿ ಸೌಲಭ್ಯ ಒದಗಿಸುವ ಮತ್ತು ವಿವಿಧ ಕ್ಷೇತ್ರಗಳನ್ನು ಅಭಿವೃದ್ಧಿಗೊಳಿಸಲು ಈ ಯೋಜನೆಗಳು ಕಾರ್ಯ ರೂಪಕ್ಕೆ ಬಂದಿವೆ. ಇವನ್ನು ಅಮೆರಿಕ ಸಂಯುಕ್ತ ಸಂಸ್ಥಾನಗಳ ಟೆನಸೀ ನದಿಕಣಿವೆ ಯೋಜನೆಯ ಮಾದರಿಯಲ್ಲಿ ರೂಪಿಸಲಾಗಿದೆ. ನದಿಗಳಿಗೆ ಅಡ್ಡಲಾಗಿ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿ, ನೀರು ಸಂಗ್ರಹಿಸಿ, ನೀರಾವರಿ ವಿದ್ಯುದುತ್ಪಾದನೆ, ನೆರೆನಿಯಂತ್ರಣ, ನೌಕಾಸಾರಿಗೆ, ಮೀನುಗಾರಿಕೆ, ಕುಡಿಯುವ ನೀರಿನ ಪೂರೈಕೆ ಮನರಂಜನೆ ಮೊದಲಾದ ಉದ್ದೇಶಗಳನ್ನು ಪೂರೈಸಲಾಗುತ್ತಿದೆ. 1951 ಏಪ್ರಿಲ್ 1ರಿಂದ 1979 ಮಾರ್ಚ್ 31ನ ಅವಧಿಯಲ್ಲಿ ಶುರುವಾದ ಸುಮಾರು 934 ದೊಡ್ಡ ಮತ್ತು ಮಧ್ಯಮ ಗಾತ್ರದ ನೀರಾವರಿ ಯೋಜನೆಗಳಲ್ಲಿ 526 ಯೋಜನೆಗಳು ಪೂರ್ಣಗೊಂಡಿವೆ. ದೊಡ್ಡ, ಮಧ್ಯಮ ಮತ್ತು ಸಣ್ಣ ಪರಿಮಾಣದ ನೀರಾವರಿ ಯೋಜನೆಗಳಿಂದ ನೀರಾವರಿಗೆ ಒಳಪಟ್ಟ ಭೂಮಿಯ ವಿಸ್ತೀರ್ಣ 1950-51ರಲ್ಲಿ 226 ಲಕ್ಷ ಹೆಕ್ಟೇರುಗಳಷ್ಟು ಇದ್ದುದ್ದು 1978-79ರಲ್ಲಿ 585 ಲಕ್ಷ ಹೆಕ್ಟೇರುಗಳಿಗೆ ಏರಿತು.

	ಪ್ರಮುಖ ನದಿಕಣಿವೆ ಯೋಜನೆಗಳು. 1 ದಾಮೋದರ್ ನದಿಕಣಿವೆ ಯೋಜನೆ: ದಾಮೋದರ್ ನದಿ ಬಿಹಾರ್‍ನ ಛೋಟಾ ನಾಗಪುರ್ ಬೆಟ್ಟಗಳಲ್ಲಿ ಹುಟ್ಟಿ ಬಿಹಾರ ರಾಜ್ಯದಲ್ಲಿ ಸುಮಾರು 270 ಕಿಮೀ ದೂರ ಹರಿದು ಪಶ್ಚಿಮ ಬಂಗಾಲ ಸೇರುತ್ತದೆ. ಅಲ್ಲಿ ಸುಮಾರು 235 ಕಿಮೀ ದೂರ ಹರಿದು ಹೂಗ್ಲೀ ನದಿಯನ್ನು ಸೇರುತ್ತದೆ. ಬಿಹಾರದಲ್ಲಿ ಈ ನದಿಗೆ ಅನೇಕ ಚಿಕ್ಕ ನದಿಗಳು ಸೇರುತ್ತವೆ. ಅವುಗಳಿಂದಾಗಿ ದಾಮೋದರ್ ನದಿಕಣಿವೆಯ ಕ್ಷೇತ್ರ ಸುಮಾರು 21,437 ಚಕಿಮೀ ಗಳಷ್ಟಿದೆ. ಈ ನದಿಯಲ್ಲಿ ಆಗಿಂದಾಗ ಉಂಟಾಗುವ ನೆರಹಾವಳಿಯಿಂದ ಭೂಮಿ ಚೌಳಾಗಿ, ಜನರಿಗೆ ಚಳಿಜ್ವರದ ಪಿಡುಗು, ಬೇಸಗೆಯಲ್ಲಿ ನೀರಿನ ಕೊರತೆ ಇವೆಲ್ಲವನ್ನೂ ಗಮನಿಸಿ ಅಭಿವೃದ್ಧಿಕಾರ್ಯಗಳಿಗೆ ನದಿಯ ನೀರು ಬಳಸಿಕೊಳ್ಳುವ ಯೋಜನೆ ಸಿದ್ಧಪಡಿಸಲಾಯಿತು. ಇದರ ಪ್ರಕಾರ ದಾಮೋದರ್ ಮತ್ತು ಅದರ ಉಪನದಿಗಳಿಗೆ ಅಣೆಕಟ್ಟು ನಿರ್ಮಿಸಲಾಗಿದೆ. ತಿಲೈಯ ಕೋನಾರ, ಮೈಥಾನ ಮತ್ತು ಪಾಂಬೇಟ ಬೆಟ್ಟ ಎಂಬಲ್ಲಿ ನಾಲ್ಕು ಜಲಾಶಯಗಳು ನಿರ್ಮಾಣಗೊಂಡಿವೆ. ಕೋನಾರವನ್ನು ಬಿಟ್ಟು ಉಳಿದ ಮೂರು ಜಲಾಶಯಗಳ ಎಡೆಗಳಲ್ಲಿ ಸುಮಾರು ಹತ್ತುಲಕ್ಷ ನಲವತ್ತು ಸಾವಿರ ಕಿಲೋವ್ಯಾಟು ವಿದ್ಯುತ್ತನ್ನು ಉತ್ಪಾದಿಸಲಾಗುತ್ತಿದೆ. ಜೊತೆಗೆ ಬೊಕಾರೊ, ದುರ್ಗಾಪುರ, ಚಂದ್ರಪುರಗಳಲ್ಲಿ ವಿದ್ಯುತ್ತಿನ ಶಾಖೋತ್ಪನ್ನ ಘಟಕಗಳಿಂದ 9,57,000 ಕಿಲೊವಾಟುಗಳಷ್ಟು ವಿದ್ಯುತ್ತು ಲಭಿಸುತ್ತದೆ. ನಾಲ್ಕು ಜಲಾಶಯಗಳಿಂದ ಒಟ್ಟು 4,16,841 ಹೆಕ್ಟೇರ್ ಭೂಮಿಗೆ ನೀರು ಪೂರೈಕೆಯಾಗುತ್ತದೆ. ಈ ಯೋಜನೆಯಿಂದ ನೆರೆಹಾವಳಿ ತಗ್ಗಿದೆ. ನೀರಾವರಿಯಿಂದ ಮೂಲಕ ವರ್ಷದಲ್ಲಿ ಎರಡು ಬೆಳೆ ಸಾಧ್ಯವಾಗಿದೆ. ವಿದ್ಯುತ್ತಿನ ಉತ್ಪತ್ತಿಯಿಂದಾಗಿ ಕೈಗಾರಿಕೆಗಳಿಗೆ ಲಾಭವಾಗಿದೆ. ಜಲಸಾರಿಗೆ ಸಾಧ್ಯವಾಗಿದೆ. ಮೀನುಗಾರಿಕೆಯ ಅಭಿವೃದ್ಧಿ, ರಮಣೀಯ ಉದ್ಯಾನ, ಚಳಿಜ್ವರದ ನಿರ್ಮೂಲನ ಇವೆಲ್ಲ ಈ ಯೋಜನೆಯಿಂದಾದ ಇತರ ಲಾಭಗಳು.

	2 ಭಾಕ್ರಾ-ನಾಂಗಲ್ ನದಿಕಣಿವೆ ಯೋಜನೆ: ಪಂಜಾಬ್, ಹರಿಯಾಣ ಮತ್ತು ರಾಜಸ್ತಾನÀ ರಾಜ್ಯಗಳಿಗೆ ಸಂಬಂಧಿಸಿದ ವಿವಿಧೋದ್ದೇಶ ಯೋಜನೆ, ಭಾರತದಲ್ಲೇ ಅತ್ಯಂತ ದೊಡ್ಡದಾದ ನದಿಕಣಿವೆ ಯೋಜನೆ ಇದು. ಪಂಜಾಬಿನ ರಾಜಧಾನಿ ಚಂಡೀಗಢದಿಂದ ಸುಮಾರು 115 ಕಿಲೊಮೀಟರ್ ದೂರದ ಭಾಕ್ರಾ ಮತ್ತು ಅಲ್ಲಿಂದ ಸುಮಾರು 12 ಕಿಲೊಮೀಟರ್ ದೂರದಲ್ಲಿ ನಾಂಗಲ್ ಎಂಬಲ್ಲಿ ಸೆಟ್ಲೆಜ್ ನದಿಗೆ ಅಡ್ಡಲಾಗಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಮೊದಲು ಈ ನದಿಯಲ್ಲಿನ ಮಹಾಪೂರದಿಂದ ಅಪಾರನಷ್ಟ, ಬೇಸಿಗೆಯಲ್ಲಿ ನೀರಿನ ಅಭಾವ ಮಾಮೂಲಾಗಿದ್ದುವು. ಇವಕ್ಕೆ ಪರಿಹಾರವಾಗಿ ಭಾಕದಲ್ಲಿ ಏಷ್ಯದಲ್ಲೇ ಅತ್ಯಂತ ಎತ್ತರ (226ಮೀ)ವಾದ ನೇರಗುರುತ್ವಮಾದರಿಯ ಅಣೆಕಟ್ಟನ್ನು ನಿರ್ಮಿಸಲಾಯಿತು. ಇದರಿಂದ ಗೋವಿಂದ ಸಾಗರ ಬೃಹತ್ ಜಲಾಶಯವೂ ನಿರ್ಮಾಣವಾಗಿದೆ. ಭಾಕ್ರ ಯೋಜನೆಯ ಪ್ರಮುಖ ಕಾಲವೆ ರಾಯಪುರದಿಂದ ಪ್ರಾರಂಭವಾಗುತ್ತದೆ. ಇದರ ಉದ್ದ 168 ಕಿಮೀ. ಇದಲ್ಲದೆ ಈ ಯೋಜನೆಯಲ್ಲಿ 104 ಕಿಮೀ ಉದ್ದದ ಇನ್ನೊಂದು ಕಾಲುವೆಯೂ ಸೇರಿದೆ. ಇಲ್ಲಿಯ ಕಾಲುವೆಗಳ ಒಟ್ಟು ಉದ್ದ 1104 ಕಿಮೀ. ಈ ಕಾಲುವೆಗಳ ಶಾಖೆಗಳು ವಿವಿಧ ದಿಕ್ಕುಗಳಲ್ಲಿ ಸುಮಾರು 3360 ಕಿಮೀ ದೂರದವರೆಗೆ ಹರಡಿವೆ. ಭಾಕ್ರಾ ನಾಂಗಲ್ ಯೋಜನೆಯಿಂದ ಪ್ರತಿವರ್ಷ 14,60,000 ಹೆಕ್ಟೇರ್ ಭೂಮಿಗೆ ನೀರೊದಗುತ್ತಲಿದೆ. ಇಲ್ಲಿಯ ವಿದ್ಯುತ್ಕೇಂದ್ರಗಳಿಂದ 1204 ಕಿಲೊವಾಟುಗಳಷ್ಟು ವಿದ್ಯುತ್ತು ಉತ್ಪಾದನೆಯಾಗುತ್ತಿದೆ. ನೆರೆನಿಯಂತ್ರಣ, ನೀರಾವರಿ ವಿದ್ಯುದುತ್ಪಾದನೆ, ಭೂಸಂರಕ್ಷಣೆಗಳ ಲಾಭವಾಗಿವೆ.

	3 ಹಿರಾಕುಡ್ ನದಿಕಣಿವೆ ಯೋಜನೆ: ಒರಿಸ್ಸ ರಾಜ್ಯದ ಸಂಬಾಲ್‍ಪುರದಿಂದ 14.5ಕಿಮೀ ದೂರದ ಎರಡು ಗುಡ್ಡಗಳ ಶ್ರೇಣಿಗಳ ನಡುವೆ ಹರಿಯುವ ಮಹಾನದಿಯ ಅಡ್ಡ ನಿರ್ಮಾಣವಾಗಿರುವ ಅಣೆಕಟ್ಟು. ಇದರ ಜಲಾಶಯದ ವಿಸ್ತೀರ್ಣ 746 ಚಕಿಮೀ. ಮಹಾನದಿ ಮಧ್ಯಪ್ರದೇಶದ ರಾಮಪುರ ಜಿಲ್ಲೆಯಲ್ಲಿ ಉಗಮಗೊಂಡು ಪೂರ್ವಾಭಿಮುಖವಾಗಿ ಹರಿದು ಬಂಗಾಳಕೊಲ್ಲಿ ಸೇರುತ್ತದೆ. ಹರಿವಿನ 853 ಕಿಮೀ ಉದ್ದಕ್ಕೂ ಅನೇಕ ಉಪನದಿಗಳು ಇದನ್ನು ಕೂಡಿಕೊಳ್ಳುತ್ತವೆ. ಮಳೆಗಾಲದಲ್ಲಿಯ ನೆರೆಹಾವಳಿ ತಪ್ಪಿಸುವುದು, ಜಲವಿದ್ಯುತ್ತಿನ ಉತ್ಪತ್ತಿ ಮತ್ತು ನೀರಾವರಿ ಇವು ಈ ಯೋಜನೆಯ ಪ್ರಮುಖ ಉದ್ದೇಶಗಳು. ಈ ಯೋಜನೆಯ ಅನ್ವಯ ಹಿರಾಕುಡ್, ಟಕ್ಕಾರ್‍ಪುರ ಮತ್ತು ನಾರಜ್ ಎಂಬ ಮೂರು ಸ್ಥಳಗಳಲ್ಲಿ ಅಣೆಕಟ್ಟು ನಿರ್ಮಿಸಲಾಗಿದೆ. ಪ್ರತಿಯೊಂದೆಡೆಯಲ್ಲೂ ಕಾಲುವೆ ಮತ್ತು ವಿದ್ಯುದುತ್ಪಾದನಾ ಕೇಂದ್ರಗಳು ಇವೆ. ಇಡೀ ಯೋಜನೆಯಿಂದ ಒಂದು ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ದೊರೆತಿದೆ. ವಿದ್ಯುದುತ್ಪಾದನಾ ಕೇಂದ್ರಗಳಿಂದ 5 ಲಕ್ಷ ಕಿಲೊವಾಟುಗಳಷ್ಟು ವಿದ್ಯುತ್ತು ಉತ್ಪತ್ತಿಯಾಗುತ್ತದೆ. ಈ ಯೋಜನೆಯಿಂದ ಒರಿಸ್ಸರಾಜ್ಯದ ಕೃಷಿ ಹಾಗೂ ಕೈಗಾರಿಕಾಭಿವೃದ್ಧಿ ಮತ್ತು ಗಣಿ ಉದ್ಯಮ ಪ್ರಗತಿಹೊಂದಿವೆ. ಅಂತರಿಕ ಜಲಮಾರ್ಗ ಸಹ ಅಭಿವೃದ್ಧಿಯಾಗಿದೆ. ನೆರಹಾವಳಿ ನಿಯಂತ್ರಣವಾಗಿದೆ. ಹಿರಾಕುಡ್ ಯೋಜನೆಯನ್ನು ಮಹಾನದಿಯ ಮುಖಜಭೂಮಿ ಪ್ರದೇಶಕ್ಕೂ ವಿಸ್ತರಿಸುವುದರಿಂದ ಸುಮಾರು 5.15 ಲಕ್ಷ ಹೆಕ್ಟೇರುಗಳಷ್ಟು ಹೆಚ್ಚಿನ ಭೂಮಿಗೆ ನೀರಾವರಿ ಸೌಲಭ್ಯ ಒದಗಿದೆ. 

	4 ನಾಗಾರ್ಜುನ ಸಾಗರ ಯೋಜನೆ: ಆಂಧ್ರ ಪ್ರದೇಶದ ನಲಗೊಂಡ ಜಿಲ್ಲೆಯ ಮಿರ್ಯಲಗೂಡ ತಾಲ್ಲೂಕಿನ ನಂದಿಕೊಂಡ ಎಂಬ ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡವಾಗಿ 1450ಮಿ ಉದ್ದ ಬೃಹತ್‍ಗಾತ್ರದ ಅಣೆಕಟ್ಟೆ ಕಟ್ಟಲಾಗಿದೆ. ಕೃಷ್ಣಾ ನದಿಯ ನೀರನ್ನು ನೀರಾವರಿಗೂ ಜಲವಿದ್ಯುಚ್ಛಕ್ತಿಯ ಉತ್ಪಾದನೆಗೂ ಬಳಸುವ ಗುರಿ ಈ ಯೋಜನೆಯದು. ನದಿಯ ಉಭಯ ಪಾಶ್ರ್ವಗಳಲ್ಲೂ ಕಾಲುವೆ ನಿರ್ಮಾಣ ಆಗಿದೆ. ಪ್ರತಿಯೊಂದರ ಬಳಿ ಒಂದೊಂದು ವಿದ್ಯುದುತ್ಪಾದನಾ ಕೇಂದ್ರ ಇದೆ. ಉತ್ಪಾದನಾ ಸಾಮಥ್ರ್ಯ 50,000 ಕಿಲೊವಾಟುಗಳು. ನದಿಯ ಬಲದಂಡೆ ಕಾಲುವೆಯ ಉದ್ದ 204ಕಿಮೀ. ಇದು 21,000 ಕ್ಯೂಸೆಕ್ ಪರಿಮಾಣದ ನೀರನ್ನು ಸಾಗಿಸುವ ಸಾಮಥ್ರ್ಯ ಪಡೆದಿದೆ. ಇದರಿಂದ ಸುಮಾರು 8,09,400 ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಒದಗಿದೆ. 1 ಲಕ್ಷ ಹೆಕ್ಟೇರುಗಳಷ್ಟು ಭೂಮಿಗೆ ನೀರಾವರಿ ಸೌಕರ್ಯ ಒದಗಿಸಲಾಗಿದೆ. ಈ ಯೋಜನೆಯ ಮೊದಲ ಹಂತದ ವಿದ್ಯುತ್ಕೇಂದ್ರದ ಉತ್ಪಾದನಾ ಸಾಮಥ್ರ್ಯ 110 ಮೆಗಾವಾಟುಗಳು.	5 ತುಂಗಭದ್ರಾ ಯೋಜನೆ: ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಿಗೆ ಸಂಬಂಧಿಸಿದ ವಿವಿಧೋದ್ದೇಶ ಯೋಜನೆ. ಕರ್ನಾಟಕದಲ್ಲಿ ಹೊಸಪೇಟೆಯಿಂದ ಸುಮಾರು 5 ಕಿಮೀದೂರದಲ್ಲಿರುವ ಮಲ್ಲಪುರಮ್ ಎಂಬಲ್ಲಿ ತುಂಗಭದ್ರಾನದಿಗೆ ಅಡ್ಡವಾಗಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. 2,441ಮೀ ಉದ್ದದ ಮತ್ತು 49.39ಮೀ ಎತ್ತರದ ಅಣೆಕಟ್ಟು, 227 ಕಿಮೀ ಉದ್ದದ ಎಡೆದಂಡೆ ಕಾಲುವೆ, 349 ಕಿಮೀ ಉದ್ದದ ಕೆಳದಂಡೆ ಕಾಲುವೆ, 196 ಕಿಮೀ ಉದ್ದದ ಮೇಲ್ಡಂಡೆ ಕಾಲುವೆ, ವಿದ್ಯುದುತ್ಪಾದನಾ ಕೇಂದ್ರ ಬೃಹತ್ ಜಲಾಶಯ-ಇವು ಈ ಯೋಜನೆಯ ವೈಶಿಷ್ಟ್ಯಗಳು. ಎಡದಂಡೆ ಮತ್ತು ಕೆಳದಂಡೆ ಕಾಲುವೆಗಳು ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿಯ 4 ಲಕ್ಷ 8 ಸಾವಿರ ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸುತ್ತವೆ. ಮೇಲ್ದಂಡೆ ಕಾಲುವೆ 1,80,000 ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತದೆ. ಇಲ್ಲಿಯ ಮೂರು ವಿದ್ಯುದುತ್ಪಾದನಾ ಕೇಂದ್ರಗಳಿಂದ ಒಟ್ಟು 99 ಮೆಗವಾಟುಗಳಷ್ಟು ವಿದ್ಯುತ್ತು ಉತ್ಪತ್ತಿಯಾಗುತ್ತದೆ.

	6 ಕೃಷ್ಣ ಮೇಲ್ದಂಡೆ ಯೋಜನೆ: ಕರ್ನಾಟಕ ರಾಜ್ಯದ ಒಣಜಿಲ್ಲೆಗಳೆಂದು ಹೆಸರು ಪಡೆದಿರುವ ಬಿಜಾಪುರ, ರಾಯಚೂರು ಮತ್ತು ಗುಲ್ಬರ್ಗಗಳ ಭೂಮಿಗೆ ನೀರು ಒದಗಿಸವುದು ಈ ಯೋಜನೆಯ ಗುರಿ. ಈ ಜಿಲ್ಲೆಗಳು ಅಗಾಗ್ಗೆ ಅನಾವೃಷ್ಟಿಯಿಂದ ಬರಗಾಲಕ್ಕೆ ಈಡಾಗುತ್ತಿರುತ್ತವೆ. ಇಲ್ಲಿಯ ಕಪ್ಪು ಭೂಮಿ ಫಲವತ್ತಾಗಿದೆ. ಮಳೆ ಹೆಚ್ಚಿಗೆ ಬೇಕಾಗುವುದಿಲ್ಲ. ಇಂಥ ಭೂಮಿಗೆ ನೀರುಣಿಸುವ ಹಾಗೂ ಅದೇ ವೇಳೆ ಜಲವಿದ್ಯುತ್ತನ್ನು ಉತ್ಪಾದಿಸುವ ಉದ್ದೇಶವಿಟ್ಟುಕೊಂಡೇ ಈ ಯೋಜನೆ ಕಾರ್ಯರೂಪಕ್ಕೆ ಬಂತು, ಇದನ್ನು ಎರಡು ಹಂತಗಳಲ್ಲಿ ಪೂರ್ತಿಗೊಳಿಸಲಾಗಿದೆ. ಮೊದಲನೆಯದಾಗಿ ಬಿಜಾಪುರ ಜಿಲ್ಲೆಯ ಆಲಮಟ್ಟಿ ಎಂಬಲ್ಲಿ ಕೃಷ್ಣಾ ನದಿಗೆ ಅಡ್ಡ ಕಟ್ಟೆಯ ನಿರ್ಮಾಣ. ಇಲ್ಲಿಯ ಜಲಾಶಯದ ಸಾಮಥ್ರ್ಯ 5094 ಘನಮೀಟರ್ ನೀರು. ಈ ಹಂತದ ಕೆಲಸ 1964ರಲ್ಲಿ ಶುರುವಾಯ್ತು. ಅಣೆಕಟ್ಟಿನ ಎಡದಂಡೆ ಕಾಲುವೆಯ ಉದ್ದ ಸುಮಾರು 423 ಕಿಮೀ, ರಾಯಚೂರು ಜಿಲ್ಲೆಯ 40,470 ಹೆಕ್ಟೇರ್, ಬಿಜಾಪುರ ಜಿಲ್ಲೆಯ 1,10,078 ಹೆಕ್ಟೇರ್ ಗುಲ್ಬರ್ಗ ಜಿಲ್ಲೆಯ 1,12,506 ಹೆಕ್ಟೇರ್ ಭೂಮಿಗೆ ನೀರೊದಗಿಸುವ ಸಾಮಥ್ರ್ಯ ಇದಕ್ಕಿದೆ.

	ಯೋಜನೆಯ ಎರಡನೆಯ ಹಂತದಲ್ಲಿ ಸೇರಿದಂತೆ ಗುಲ್ಬರ್ಗ ಜಿಲ್ಲೆಯ ನಾರಾಯಣಪುರದ ಬಳಿ ಕೃಷ್ಣಾನದಿಗೆ ಅಡ್ಡ ಒಂದು ಅಣೆಕಟ್ಟು ಇದೆ. ಇಲ್ಲಿನ ಜಲಾಶಯದ ಜಲ ಶೇಖರಣಾ ಸಾಮಥ್ರ್ಯ 13,951 ಘನ ಮೀಟರುಗಳು. ಅಣೆಕಟ್ಟಿನ ಎಡದಂಡೆ ಕಾಲುವೆಯ ಉದ್ದ 150 ಕಿಮೀ. ಇದು ಗುಲ್ಬರ್ಗ ಜಿಲ್ಲೆಯ 1,13,316 ಹೆಕ್ಟೇರ್ ಭೂಮಿಗೆ ನೀರು ಒದಗಿಸಬಲ್ಲದು. ಬಲದಂಡೆ ಕಾಲುವೆ ರಾಯಚೂರು ಜಿಲ್ಲೆಯ 1,49,739 ಹೆಕ್ಟೇರ್ ಭೂಮಿಗೆ ನೀರು ಒದಗಿಸಬಲ್ಲದು. ಅಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳೆರಡರ ಸಾಮಥ್ರ್ಯ ಒಟ್ಟು 7,68,330 ಹೆಕ್ಟೇರ್ ಭೂಮಿಗೆ ನೀರೊದಗಿಸುವುದು.

	ಇವೆಲ್ಲದೇ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ಜಂಟಿ ಪ್ರಯತ್ನದ ಬೀಯಾಸ್ ಯೋಜನೆ; ಭಾರತ ಮತ್ತು ನೇಪಾಳಗಳ ಸಂಯುಕ್ತ ಪ್ರಯತ್ನದ ಗಂಡಕ್ ಯೋಜನೆ; ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಿಗೆ ಸಂಬಂಧಿಸಿದ ಚಂಬಲ್ ಯೋಜನೆ; ಮಾಹಿನದೀ ಯೋಜನೆ; ಬಿಹಾರಿನ ಕೋಸಿ ನದಿ ಯೋಜನೆ; ರಾಜಸ್ಥಾನ ಕಾಲುವೆ ಯೋಜನೆ; ಉತ್ತರ ಪ್ರದೇಶದ ರಾಮಗಂಗಾಯೋಜನೆ ಮುಂತಾದ ಯೋಜನೆಗಳಿಂದಾಗಿ ಭಾರತದ ನೀರಾವರಿ ವ್ಯವಸ್ಥೆ ಬಲು ಸಮರ್ಥವೂ ಪರಿಣಾಮಕಾರಿಯೂ ಆಗಿದೆ.

	ಭಾರತದ ದೊಡ್ಡ ನೀರಾವರಿ ಯೋಜನೆಗಳು (ಆವರಣಗಳಲ್ಲಿ ಅವು ಪೂರ್ಣಗೊಂಡ ಇಸವಿಗಳನ್ನು ಕೊಟ್ಟಿದೆ) ರಾಜ್ಯವಾರು ವಿಂಗಡಣೆ:

	1 ಆಂಧ್ರ ಪ್ರದೇಶ ರಾಮ್‍ಪೆರು ನೀರ್ಗಾಲುವೆ (1956); ಗೋದಾವರಿ ಮುಖಜಭೂಮಿ ವ್ಯವಸ್ಥೆ (1890); ಜಾಮ್ ಸಾಗರ್ (1931); ರಾಲ್ಲಪಾಡ್ (1957); ಮೇಲಿನ ಪೆನ್ನಾರ್ (1958); ಕೆ.ಸಿ. ಕಾಲುವೆ (1963-64); ಪ್ರಕಾಶಮ್ ಅಣೆಕಟ್ಟು (1959-60); ಭೈರವಾಣಿ ತಿಪ್ಪ (1961-62); ಗೋದಾವರಿ ಮೊದಲ ಹಂತ (1950-66); ತುಂಗಭದ್ರಾ (1951-56); ಕಡ್ಡಮ್ (1968-69).

	2 ಉತ್ತರ ಪ್ರದೇಶ; ಮೇಲಿನ ಗಂಗಾ ಕಾಲುವೆ (1884); ಅಗ್ರ ಕಾಲುವೆ ಪುನಾರೂಪಿಕ (1959-60); ಕೆಳಗಿನ ಗಂಗಾ ಕಾಲುವೆ (1879); ಶರ್ದ ಕಾಲುವೆ (1926); ಶರ್ದ ಕಾಲುವೆ ವಿಸ್ತರಣೆ (1955-56); ಮತಾತಿಲ್ಲ (1951-56); ಬೆಟ್ಟಾ ಕಾಲುವೆ (1886); ಜಿರ್ಗೋ ಜಲಾಶಯ (1960); ಬೇಲನ್ ಮತ್ತು ಟನ್ಸ್ ಕಾಲುವೆ (1958-59); ಬ್ಯಾನ್ ಗಂಗಾ ಕಾಲುವೆ (1956-57); ಘಂಗರ್ ಕಾಲುವೆ (1917); ಶರ್ದ ಸಾಗರ್ ಮೊದಲನೆಯ ಹಂತ (1960-61); ಮತಾತಿಲ್ಲ ಮೊದಲ ಹಂತ (1957-58); ಶರ್ದ ಸಾಗರ್ ಎರಡನೆಯ ಹಂತ (1967-68).

	3 ಒರಿಸ್ಸ; ರಾಶ್ ಕುಲ್ಯ ಕಾಲುವೆ (1901); ಹಿರಾಕುಡ್ ಮೊದಲ ಹಂತ (1951-55); ಸಲಾಂದಿ (1968-69).

	4 ಕರ್ನಾಟಕ: ಕೃಷ್ಣರಾಜಸಾಗರ ಅಣೆಕಟ್ಟು ಮತ್ತು ನಾಲೆ (1930); ತುಂಗಾ ಅಣೆಕಟ್ಟು (1958-59); ನುಗು (1958-59); ಘಟಪ್ರಭಾ ಎಡದಂಡೆ ನಾಲೆ; ಮೊದಲನೆಯ ಹಂತ (1958-59), ತುಂಗಭದ್ರಾ (1951-56).
	5 ಕೇರಳ: ಕುಟ್ಟಂದೆ (1957); ಪೀಚಿ (1957-58); ನಯ್ಯರ್ (1959-60), ಮಲಂಪ್ಪೂಳ (1959-60); ವಾಳಯರ್ ಜಲಾಶಯ (1958-59); ಚಾಲುಕ್ಕುಡಿ ಮೊದಲ ಹಂತ (1957-58); ವಡಕ್ಕನ್‍ಚ್ಚೇರಿ (1959-60).

	6 ಗುಜರಾತ್: ರಂಗೋಲ (1952); ಬ್ರಾಹ್ಮಣಿ (1954); ಮಜ್ (1956); ಅಜಿ (1961-62); ಮಾಚ್ಚೂ-I (1961-62); ಕಕ್ರಪಾರ (1968-69) ಬನಾಸ್ (1968-69); ಹತ್‍ಮತಿ (1968-69).

	7 ಜಮ್ಮು ಮತ್ತು ಕಾಶ್ಮೀರ ನಿಂದ್ ಕಣಿವೆ (1956)

	8 ತಮಿಳುನಾಡು; ಪೆರಿಯಾರ್ ವ್ಯವಸ್ಸೆ (1897); ಕಾವೇರಿ-ಮೆಟ್ಟೂರ್ (1934): ಕೆಳಭವಾನಿ (1956); ಪೆರಿನ್‍ಚ್ಚಾರಿ (1956); ಅರಣಿಮಾರ್ ಜಲಾಶಯ (1957); ಮೆಟ್ಟೂರು ಕಾಲುವೆಗಳು (1957); ಕೃಷ್ಣಗಿರಿ (1958); ಸಾತನ್‍ಪುರ್ (1959); ಅಮರಾವತಿ (1959); ಕಟ್ಟಲೈ ಎತ್ತರಮಟ್ಟ ಕಾಲುವೆ ಯೋಜನೆ (1959); ಪುಲ್ಲಂಬಾಡಿ ಕಾಲುವೆ ಯೋಜನೆ (1959); ಮಣಿ ಮುತ್ತಾರ್ (1967-68).

	9 ಪಂಜಾಬ್: ಪಶ್ಚಿಮದ ಜಮ್ಮು ಕಾಲುವೆ (1886); ಮೇಲಿನ ಬಾರಿ ದೋ ಬ್ ಕಾಲುವೆ (1978-79); ಸಿರ್‍ಹಿಂದ್ ಕಾಲುವೆ (1886-87) ಪೂರ್ವದ ಕಾಲುವೆ ವಿಸ್ತರಣೆ (1944-45); ದಾದ್ರಿ (1961); ಭಾಕ್ರಾ-ನಾಂಗಲ್ (1951-56); ಹಾರಿಕಿ (1967-69); ಸಿರ್ ಹಿಂದ್ ಉಪನದಿ (1967-68).

	10 ಪಶ್ಚಿಮ ಬಂಗಾಲ: ದಾಮೋದರ್ ಕಾಲುವೆ (1956); ಮಯೂರಾಕ್ಷಿ (1956-57).

	11 ಬಿಹಾರ್: ಸೋನೆ ಕಾಲುವೆ (1891); ಕಮಲ ಕಾಲುವೆ (1978); ಮಯೂರಾಕ್ಷಿ ಎಡದಂಡೆ ಕಾಲುವೆ (1957); ತ್ರಿವೇಣಿ ಕಾಲುವೆ ವಿಸ್ತರಣೆ (1958-59); ನಾಟಿಕಟ್ಟೆ (1960-61); ಬಾದ್ವ (1967-68); ಸೋನೆ ಅಣೆಕಟ್ಟು (1968-69).

	12 ಮಧ್ಯಪ್ರದೇಶ; ತಂಡುಲ ಕಾಲುವೆಗಳು (1921); ಮಹಾನದಿ ಕಾಲುವೆಗಳು (1927); ಸಮ್‍ಪ್ನ (1959); ಗಂಗೂಲ್ ಪಾರ (1960-61); ಹಾಸ್‍ದಿಯೋ (1958-60).

	13 ಮಹಾರಾಷ್ಟ್ರ: ನೀರಾ ಎಡದಂಡೆ ನಾಲೆ (1960); ಪ್ರವರ ನದಿ ಕೆಲಸಗಳು (1938); ನೀರಾ ಬಲದಂಡೆ ನಾಲೆ (1938); ಗಂಗಾಪುರ್ ಜಲಾಶಯ (1959); ಪೂಡ್ (1967-68); ವೀರ್ (1967-68); ಖಡಕ್ ವಾಸ್ಲ, ಮೊದಲ ಹಂತ (1968-69); ಪೂರ್ಣ (1968-69).

	14 ರಾಜಸ್ಥಾನ: ಜವಾಯಿ ಯೋಜನೆ (1958-59); ನಮೋನ (1959); ಸಾರೇರಿ (1960); ಸಾರ್ಬತಿ ಯೋಜನೆ (1961); ಮೇಜ ಯೋಜನೆ (1961).								
(ಎಚ್.ಸಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ